ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ ಬೆಳೆಗಾರರಿಗೆ ನೆರವಾಗಲು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಂಗು ಬೆಳೆಯುವ ರೈತರು ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.ತೆಂಗು ಬೆಳೆ ವಿಮಾ ಯೋಜನೆ ತೆಂಗಿನ ಗಿಡ/ ಮರಗಳಿಗೆ ಇರುವ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ, ಮಂಡಳಿಯವರು Agriculture insurance company ಅವರ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಆರೋಗ್ಯವಂತ ತೆಂಗಿನ ಗಿಡಗಳು/ ಮರಗಳು (4 ರಿಂದ 60 ವರ್ಷ) ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡಗಳು/ ಮರಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಬೇಕು 5ಕ್ಕಿಂತ ಕಡಿಮೆ ಸಂಖ್ಯೆ, ತೆಂಗಿನ ಮರಗಳು/ ಗಿಡಗಳು ಈ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಹವಾಮಾನ ವೈಪರಿತ್ಯದಿಂದ, ಕೀಟ ಮತ್ತು ರೋಗದಿಂದ, ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಲ್ಲಿ, ಬರಗಾಲ, ಆಲಿಕಲ್ಲು, ಸಿಡಿಲು ಬಡಿತದಿಂದ ತೆಂಗಿನ ಗಿಡಗಳು/ ಮರಗಳು ಸಂಪೂರ್ಣ ಹಾನಿಯಾಗಿ ಸತ್ತು ಹೋದಲ್ಲಿ ಹಾನಿ ಸಂಭವಿಸಿದ 15 ದಿನಗಳೊಳಗಾಗಿ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿರುತ್ತದೆ.
ತಂಗು ಬೆಳೆ ವಿಮೆ ಕಂತಿನ ವಿವರಗಳು: ಈ ವಿಮಾ ಯೋಜನೆಯನ್ನು ತೆಂಗಿನ ಗಿಡ/ ಮರದ ವಯಸ್ಸಿನ ಆಧಾರದ ಮೇಲೆ ಮಾಡಲಾಗಿದೆ. 4 ರಿಂದ 15 ವರ್ಷದ ಗಿಡ/ ಮರ ವಿಮಾ ಮೊತ್ತ ಪ್ರತಿ ಮರ/ ಗಿಡಕ್ಕೆ 900 ರೂ., ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 2.25 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 6.75 ರೂ.ಗಳು.ಇದೇ ಮಾದರಿಯಲ್ಲಿ 16 ರಿಂದ 60 ವರ್ಷದ ಮರಕ್ಕೆ/ ಗಿಡಕ್ಕೆ 1750 ರೂ.ಗಳು. ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 3.50 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 10.50 ರೂ.ಗಳು.
ಮೇಲೆ ತಿಳಿಸಿರುವಂತೆ ಆಸಕ್ತ ಫಲಾನುಭವಿಗಳು ರೈತರ ವಂತಿಕೆಯನ್ನು ಮತ್ತು ನಿಗದಿತ ನಮೂನೆಯಲ್ಲಿ, ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸದರಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬಹುದು.