ರೈತರಿಗೆ ಅಡಮಾನ ಸಾಲವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) 1.6 ಲಕ್ಷ ರೂ. ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಿದ್ದು , ಇದು 2025 ರ ಜ. 1 ರಿಂದಲೇ ಜಾರಿಗೆ ಬರಲಿದೆ.
” ಈ ಹೊಸ ಮಾರ್ಗಸೂಚಿಯನ್ನು ತ್ವರಿತವಾಗಿ ಅಳವಡಿಸಿಕೊಂಡು ರೈತರಿಗೆ ಸುಲಭವಾಗಿ ಅಡಮಾನ ರಹಿತ ಸಾಲ ನೀಡಲು ಬ್ಯಾಂಕ್ ಗಳಿಗೆ ಸೂಚಿಸಲಾಗುವುದು. ಹೆಚ್ಚು ರೈತರನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆಯನ್ನೂ ಉತ್ತೇಜಿಸಲಾಗುತ್ತಿದೆ. RBI ನ ಈ ತೀರ್ಮಾನದಿಂದ ಸಣ್ಣ ಹಾಗೂ ಅತಿಸಣ್ಣ ರೈತರನ್ನು ಒಳಗೊಂಡಂತೆ ಶೇ.86ರಷ್ಟು ರೈತರಿಗೆ ನೆರವಾಗಲಿದೆ, ಎಂದು ಕೃಷಿ ಸಚಿವಾಲಯ ಹೇಳಿದೆ.
“ಹಣಕಾಸು ವಲಯ ವ್ಯಾಪ್ತಿಗೆ ಕೃಷಿ ಕ್ಷೇತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವುದು, ರೈತರಿಗೆ ಹೆಚ್ಚಿನ ಹೂಡಿಕೆ ಹಾಗೂ ಅವರ ಜೀವನಕ್ರಮವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಸಾಲದ ಮಿತಿ ಹೆಚ್ಚಳದಿಂದಾಗಿ ಕೃಷಿ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ,” ಎಂದು ಸಚಿವಾಲಯ ತಿಳಿಸಿದೆ.