ಬೆಳೆ ಹಾನಿ ತಪ್ಪಿಸಲು ಹವಾಮಾನ ಮುನ್ಸೂಚನಾ ಘಟಕ

ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕವನ್ನು ಒದಗಿಸುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹವಾಮಾನ ವೈಪರೀತ್ಯದಿಂದ ಆಗುವ ನಷ್ಟ ತಪ್ಪಿಸಿ, ಉತ್ತಮ ಇಳುವರಿ ಪಡೆಯಲು ನೆರವಾಗುವುದು ಇದರ ಉದ್ದೇಶ.

ಈ ಯಂತ್ರವು 3-4 ದಿನ ಮೊದಲೇ ಮಳೆಯಾಗುವ ಸಾಧ್ಯತೆಯ ಬಗ್ಗೆ ಮತ್ತು ಕೃಷಿ ಭೂಮಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ತಿಳಿಸುತ್ತದೆ. ಯಾವಾಗ ಎಷ್ಟು ನೀರನ್ನು ಬೆಳೆಗೆ ಹರಿಸಬೇಕು ಎಂದು ತಿಳಿಸುತ್ತದೆ. ಗಾಳಿಯ ವೇಗದ ಪ್ರಮಾಣದ ಜೊತೆಗೆ, ಬೆಳೆಗೆ ಯಾವ ಖಾಯಿಲೆ ಬರಬಹುದು,ಯಾವ ಔಷಧಿ ಸಿಂಪಡಿಸಬೇಕು ಮತ್ತು ಹನಿ ನೀರಾವರಿ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಎಷ್ಟು ಸಿಂಪಡಿಸಬೇಕು ಎಂಬುದು ಸಹ ಗೊತ್ತಾಗುತ್ತದೆ.

2024-25 ಮತ್ತು 2025-26ನೇ ಸಾಲಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ಘಟಕದ ದರ ಸುಮಾರು ₹40,000 ಇದೆ. ಈ ಪೈಕಿ ಸರ್ಕಾರದಿಂದ ₹20,000 ಸಹಾಯಧನ ನೀಡಲಾಗುತ್ತಿದೆ.

ಮೂಲ: ಪ್ರಜಾವಾಣಿ